ಪಿ.ಲಂಕೇಶ್

From Wikipedia

ಪಿ.ಲಂಕೇಶ್

ಪಿ.ಲಂಕೇಶ್ - ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಹಾಗು ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರು. ಮಾರ್ಚಿ ೮, ೧೯೩೫ ರಂದು ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿ ಗ್ರಾಮದಲ್ಲಿ ಜನಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಏ. ಪದವಿಯನ್ನು ಹಾಗು ಮೈಸೂರು ವಿಶ್ವವಿದ್ಯಾಲಯದಿಂದ ಎಮ್.ಏ. ಪದವಿಯನ್ನು ಪಡೆದ ಬಳಿಕ ಶಿವಮೊಗ್ಗದಲ್ಲಿಯ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು.

೧೯೬೨ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ೧೯೭೫ರ ಸುಮಾರಿಗೆ ಲಂಕೇಶರು ಅಧ್ಯಾಪಕ ವೃತ್ತಿಯನ್ನು ತ್ಯಜಿಸಿ ತಮ್ಮದೆ ಆದ ಲಂಕೇಶ್ ಪತ್ರಿಕೆ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ಈ ವಾರಪತ್ರಿಕೆ ತುಂಬ ಜನಪ್ರಿಯವಾಯಿತು.

ಲಂಕೇಶರ ಮೊದಲ ಕಥಾಸಂಕಲನ ಕೆರೆಯ ನೀರನು ಕೆರೆಗೆ ಚೆಲ್ಲಿ ೧೯೬೩ರಲ್ಲಿ ಪ್ರಕಟವಾಯಿತು. ೧೯೬೪ರಲ್ಲಿ ಅವರ ನಾಟಕಗಳಾದ ‘ಟಿ. ಪ್ರಸನ್ನನ ಗ್ರಹಸ್ಥಾಶ್ರಮ’ ಹಾಗು ‘ತೆರೆಗಳು’ ಪ್ರಕಟಗೊಂಡವು ಹಾಗು ರಂಗದ ಮೇಲೂ ಅಭಿನಯಿಸಲ್ಪಟ್ಟವು.‘ಕಲ್ಲು ಕರಗುವ ಸಮಯದಲ್ಲಿ’, ‘ನಾನಲ್ಲ’, ‘ಉಮಾಪತಿಯ ಸ್ಕಾಲರ್‍ಷಿಪ್ ಯಾತ್ರೆ’ ಇವು ಅವರ ಕೆಲವು ಕಥಾಸಂಗ್ರಹಗಳು. ‘ಬಿರುಕು’, ‘ಮುಸ್ಸಂಜೆಯ ಕಥಾಪ್ರಸಂಗವು’ ಇವು ಅವರ ಕಾದಂಬರಿಗಳು.

ಲಂಕೇಶ್ ಅವರು ಸಂಸ್ಕಾರ ಚಲನಚಿತ್ರದಲ್ಲಿ ನಾರಣಪ್ಪನ ಪಾತ್ರವನ್ನು ಅಭಿನಯಿಸಿದ್ದಾರೆ. ಅಲ್ಲದೆ ಪಲ್ಲವಿ, ಅನುರೂಪ, ಖಂಡವಿದೆ ಕೊ ಮಾಂಸವಿದೆ ಕೊ, ಎಲ್ಲಿಂದಲೊ ಬಂದವರು ಈ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪಲ್ಲವಿ ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ 'ಅತ್ಯುತ್ತಮ ನಿರ್ದೇಶಕ' ಎಂದು ಪ್ರಶಸ್ತಿ ಲಭಿಸಿದೆ.

ಹುಳಿ ಮಾವಿನಮರ ಲಂಕೇಶ್ ರ ಆತ್ಮಕಥೆ. ಇಲ್ಲಿ ಮಾವಿನಮರದ ಜೀವನ ಘಟ್ಟಗಳಂತೆ ತಮ್ಮ ಜೀವನ ಕಥನವನ್ನು ನಿರೂಪಿಸಿದ್ದಾರೆ. ಪಿ.ಲಂಕೇಶ್